ನಿಂಫೇಸೀ   
ದ್ವಿದಳ ಸಸ್ಯವರ್ಗದ ಒಂದು ಕುಟುಂಬ. ಇದರಲ್ಲಿ ಎಂಟು ಜಾತಿಗಳೂ ತೊಂಬತ್ತು ಪ್ರಭೇದಗಳೂ ಉಂಟು. ಇವು ಉಷ್ಣವಲಯದಲ್ಲೂ ಸಮಶೀತೋಷ್ಣವಲಯದಲ್ಲೂ ಕಂಡುಬರುತ್ತವೆ. ಈ ಕುಟುಂಬದ ಕೆಲವು ವಿಶಿಷ್ಟ ಲಕ್ಷಣಗಳು ಇವು : ಗಿಡಗಳು ಜಲಸಸ್ಯಗಳು. ಹೆಚ್ಚಾಗಿ ಬಹುವಾರ್ಷಿಕ ಮೂಲಿಕೆಗಳು. ಕಾಂಡ ಗೆಡ್ಡೆಯಾಗಿ ಮಾರ್ಪಾಟಾಗಿದೆ. ಎಲೆಗಳು ಸರಳ, ಪರ್ಯಾಯ ಮಾದರಿಯಲ್ಲಿ ಜೋಡಣೆಗೊಂಡಿದೆ. ಇವು ನೀರಲ್ಲಿ ತೇಲುವಂತಿರಬಹುದು. ಅಥವಾ ನೀರಿನಿಂದ ಮೇಲಕ್ಕೆ ಚಾಚಿಕೊಂಡಿರಬಹುದು. ಎಲೆಗಳಿಗೆ ಉದ್ದ ತೊಟ್ಟುಗಳುಂಟು. ಇವುಗಳ ಆಕಾರ ಹೃದಯದಂತೆ ಅಥವಾ ಉರುಳೆಯಂತೆ ಇಲ್ಲವೆ ಗುಂಡಗಿನ ತಟ್ಟೆಯಂತೆ. ವಿಕ್ಟೋರಿಯ ಎಂಬ ಜಾತಿಯ ಗಿಡದಲ್ಲಿ ಬಟ್ಟಲಿನಾಕಾರದ ದೊಡ್ಡ ಎಲೆಗಳಿದ್ದು ಇವು ಒಂದು ಚಿಕ್ಕ ಮಗುವಿನ ಭಾರವನ್ನು ತಡೆಯುವಷ್ಟು ಬಲವಾಗಿವೆ.

    ಹೂಗಳು ಪರಿಮಳಯುಕ್ತ, ಆಕರ್ಷಕ ಹಾಗೂ ದೊಡ್ಡ ಗಾತ್ರದವು. ನೀರಿನಿಂದ ಮೇಲಕ್ಕೆ ಚಾಚಿಕೊಂಡಿರುವುವು. ಎಲೆಗಳ ಕಕ್ಷದಲ್ಲಿ ಒಂಟೊಂಟಿಯಾಗಿ ಅರಳುವುವು. ಹೂವು ಪರಿಪೂರ್ಣ ಮಾದರಿಯದು. ಉಭಯ ಪಾಶ್ರ್ವ ಸಮಾಂಗತೆ ಉಳ್ಳದ್ದು. ಹೂವಿನ ವಿವಿಧ ಭಾಗಗಳು (ಪುಷ್ಪಪತ್ರ, ದಳ ಇತ್ಯಾದಿ) ಮೂಲಭೂತವಾಗಿ ಒಂದೇ ರಚನೆಯ ಮಾರ್ಪಾಡುಗಳು ಎಂಬುದಕ್ಕೆ ಈ ಕುಟುಂಬದ ಕೆಲವು ಗಿಡಗಳ ಹೂಗಳು ನಿದರ್ಶನ. ಪುಷ್ಪಪತ್ರಗಳು ಪುಷ್ಪದಳಗಳಾಗಿ, ಪುಷ್ಪದಳಗಳು ಕೇಸರಗಳಾಗಿ ಹಂತ ಹಂತವಾಗಿ ಮಾರ್ಪಡುವುದನ್ನು ಒಂದೇ ಹೂವಿನಲ್ಲಿ ನೋಡಬಹುದು.

    ಹೂವಿನಲ್ಲಿ ಪುಷ್ಪಪತ್ರಗಳ ಸಂಖ್ಯೆ ಮೂರರಿಂದ ಆರು. ಇವು ಬಿಡಿ ಬಿಡಿಯಾಗಿವೆ. ಪುಷ್ಪದಳಗಳು ಮೂರು ಅಥವಾ ಅದಕ್ಕಿಂತ ಹೆಚ್ಚಾಗಿದ್ದು ಅನೇಕ ಸುತ್ತುಗಳಲ್ಲಿ ವ್ಯವಸ್ಥಿತವಾಗಿವೆ. ಕೇಸರಗಳು ಮೂರು ಅಥವಾ ಹೆಚ್ಚು. ಪ್ರತಿಯೊಂದು ಕೇಸರದಲ್ಲಿ ಎರಡು ಪರಾಗಕೋಶಗಳುಂಟು. ಇವು ಅಂತರಮುಖಿಗಳಾಗಿದ್ದು, ಉದ್ದುದ್ದಕ್ಕೆ ಬಿರಿದು ಪರಾಗಗಳನ್ನು ಚೆಲ್ಲುತ್ತವೆ. ಕೇಸರಗಳು ಅಂಡಾಶಯದ ಸುತ್ತಲಿನ ಮಾ ಸಲವಾದ ಪುಷ್ಪಪೀಠಕ್ಕೆ ಅಂಟಿಕೊಂಡಿವೆ. ಅಂಡಾಶಯ ಮೂರು ಅಥವಾ ಹೆಚ್ಚು ಕಾರ್ಪೆಲುಗಳಿಂದ ಕೂಡಿದೆ. ಕಾರ್ಪೆಲುಗಳು ಪರಸ್ಪರ ಕೂಡಿಕೊಂಡಿರಬಹುದು ಇಲ್ಲವೆ ಬಿಡಿ ಬಿಡಿಯಾಗಿರಬಹುದು. ಹಾಗೆಯೇ ಅಂಡಾಶಯ ಉಚ್ಚಸ್ಥಾನದ್ದಾಗಿರಬಹುದು ಅಥವಾ ನೀಚಸ್ಥಾನದ್ದಾಗಿರಬಹುದು. ಅಂಡಾಶಯದಲ್ಲಿ ಅನೇಕ ಕೋಣೆಗಳುಂಟು. ಒಂದೊಂದು ಕೋಣೆಯಲ್ಲೂ ಒಳಗೋಡೆಗೆ ಅಂಟಿಕೊಂಡ ಒಂದು ಅಥವಾ ಒಂದಕ್ಕಿಂತ ಹೆಚ್ಚು ಅಂಡಕಗಳಿವೆ.

   ಕಾಯಿ ರಸಭರಿತ ಬೆರಿ (ನಿಂಫಿಯದಲ್ಲಿ), ಅಕೀನ್‍ಗಳ ಗೊಂಚಲು (ನೀಲಂಬೋವಿನಲ್ಲಿ) ಅಥವಾ ಪಾಲಿಕಲ್ (ಕಬೊಂಬೋದಲ್ಲಿ). ಬೀಜಗಳ ಅನೇಕ ಭ್ರೂಣಾಹಾರಯುಕ್ತ. ಆದರೆ ನೀಲಂಬೋವಿನಲ್ಲಿ ಭ್ರೂಣಾಹಾರರಹಿತ.

   ಈ ಕುಟುಂಬದಲ್ಲಿ ಮೂರು ಉಪಕುಟುಂಬಗಳುಂಟು:

ನೀಲಂಬಾಯ್ಡೀ: ಕಾರ್ಪೆಲುಗಳು ಬಿಡಿಬಿಡಿಯಾಗಿದ್ದು ಶಂಕುವಿನಾಕಾರದ ಪುಷ್ಪಪೀಠದ ಒಳಗೆ ಹುದುಗಿವೆ. ಉದಾಹರಣೆ: ನೀಲಂಬೋ.

ಕಬೊಂಬಾಯ್ಡೀ: ಕಾರ್ಪೆಲುಗಳು ಬಿಡಿ ಬಿಡಿಯಾಗಿವೆ. ಬೀಜಗಳಲ್ಲಿ ಪೆರಿಸ್ಟರ್ಮ್ ಇದೆ. ಉದಾಹರಣೆ: ಕಬೊಂಬೋ (ಕೇಸರಗಳು ಮೂರು ಅಥವಾ ಆರು), ಬ್ರಾಸೀನಿಯ (ಕೇಸರಗಳು ಅನೇಕ).

ನಿಂಫಾಯ್ಡೀ: ಕಾರ್ಪೆಲುಗಳು ಸಂಯುಕ್ತ ಮಾದರಿಯವು. ಉದಾ: ವಿಕ್ಟೋರಿಯ ಯೂರಿಯೇಲ್, ನಿಂಫಿಯ (ಪುಷ್ಪಪತ್ರಗಳು ನಾಲ್ಕು), ನ್ಯೂಫಾರ್. 

    ಆರ್ಥಿಕವಾಗಿ ಈ ಕುಟುಂಬದ ಸಸ್ಯಗಳು ಅಷ್ಟಾಗಿ ಉಪಯುಕ್ತವಲ್ಲ. ನೈದಿಲೆ, ಕಮಲ, ವಿಕ್ಟೋರಿಯ ಮೊದಲಾದವನ್ನು ಉದ್ಯಾನಗಳ ಜಲಾಶಯಗಳಲ್ಲಿ ಅಲಂಕಾರಕ್ಕಾಗಿ ಬೆಳೆಸುವುದಿದೆ. ನೀಲಂಬೋವಿನ ಗೆಡ್ಡೆಗಳಲ್ಲಿ ಪಿಷ್ಟವಿದೆಯಾಗಿ ಇವನ್ನು ಆಹಾರವಾಗಿ ಉಪಯೋಗಿಸುವುದಿದೆ. ಈ ಕುಟುಂಬದ ನೀಲಂಬೋ ಸ್ಪೀಶಿಯೋಸಮ್, ನಿಂಫಿಯ ನೌಚಾಲಿ, ನಿಂಫಿಯ ಸ್ಪೆಲೇಟ ಎಂಬ ಮೂರು ಪ್ರಭೇದಗಳು ಕರ್ನಾಟಕದ ಜಲಾಶಯಗಳಲ್ಲಿ ಕಂಡುಬರುತ್ತವೆ.
(ಪಿ.ಕೆ.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ